Friday, December 9, 2016

ಗುಲಬರ್ಗಾದ 'never sleeping' ತಾಣ!

ಗುಲಬರ್ಗಾದ 'never sleeping' ತಾಣ!
ಹೆಚ್ಚೇನೂ ಬೇಡ. ಸಂಜೆ ಅಥವಾ ರಾತ್ರಿ ವೇಳೆ ಬರೀ 30 ನಿಮಿಷ. ಅಲ್ಲಿರುವ ಕಟ್ಟೆ ಮೇಲೆ ಕೂರಿ. ಇಲ್ಲದಿದ್ದರೆ, ಅದರ ಬದಿ ನಿಲ್ಲಿ. ಅಪರಿಚಿತರಾಗಿ ಇರಿ. ಯಾರನ್ನೂ ಮಾತನಾಡಿಸಬೇಡಿ. ಪರಿಚಯಿಸಿಕೊಳ್ಳುವ ಗೋಜಿಗೂ ಹೋಗಬೇಡಿ. ತಲೆಯಲ್ಲಿ ಎಂತಹದ್ದು ಯೋಚನೆ ಇಟ್ಟುಕೊಳ್ಳಬೇಡಿ. ಜೇಬು ಅಥವಾ ಪರ್ಸಲ್ಲಿರುವ ಮೊಬೈಲ್ ಫೋನ್ ಹೊರತೆಗೆಯಬೇಡಿ. ಮೌನವಾಗಿ ಗಮನಿಸಿ. ನಿಮಗೆ ಗೊತ್ತಿಲ್ಲದಂತೆ ಸೂಕ್ಷ್ಮತೆಯಿಂದ ಕೂಡಿರುವ ಬದುಕಿನ ಇನ್ನೊಂದು ಮುಖಕ್ಕೆ ಸಾಕ್ಷಿಯಾಗುತ್ತೀರಿ. ಹಾಗಂತ ಎಲ್ಲಿ ಬೇಕೆಂದಲ್ಲಿ ನಿಲ್ಲಬೇಡಿ. ನಿಮ್ಮ ದೊಡ್ಡೂರಿನ ರೈಲು ನಿಲ್ದಾಣದ ಸೂಕ್ತ ಸ್ಥಳ. ಇಲ್ಲಿ ಗುಲಬರ್ಗಾದ ರೈಲು ನಿಲ್ದಾಣದ ಕತೆ ಹೇಳ್ತೀನಿ. ಬಹುತೇಕ ಮಂದಿಗೆ ಅದು ಬರೀ ರೈಲು ನಿಲ್ದಾಣ. ಆದರೆ ನನ್ನ ಪಾಲಿಗೆ ಅದು 'never sleeping'' (ಎಂದೂ ಮಲಗದ) ತಾಣ.
ಸೂರ್ಯ ಮುಳುಗಿ, ಇನ್ನೇನೂ ಕತ್ತಲು ಆವರಿಸತೊಡಗುತ್ತದೆ. ಬೀದಿ ಬೀದಿ ತಿರುಗಿ ಬಿಸಿಲಲ್ಲಿ ಬೆಂದ ಭಿಕ್ಷುಕ ನಿಲ್ದಾಣದ ಮೂಲೆಯೊಂದರಲ್ಲಿ ಸೇರಿಕೊಳ್ಳುತ್ತಾನೆ. ಹರಿದ ಬಟ್ಟೆ ತೊಟ್ಟ ಪುಟ್ಟ ಮಕ್ಕಳೊಂದಿಗೆ ಬರುವ ಅನಾರೋಗ್ಯಪೀಡಿತ ತಾಯಿ ಜೋಳಿಗೆಯಿಂದ ಕಟಕಟಿ ರೊಟ್ಟಿ, ತಂಗಳನ್ನ ಹೊರತೆಗೆಯುತ್ತಾಳೆ. ಕೂದಲು ಕೆದರಿಕೊಂಡ ಮಾನಸಿಕ ಅಸ್ವಸ್ಥನೊಬ್ಬ ಚರಂಡಿ ಬದಿ ಕೂತು ಎಲ್ಲರನ್ನೂ ಬಯ್ಯತೊಡಗುತ್ತಾನೆ. ಅಲ್ಲಿ ಇಲ್ಲಿ ಅಲ್ಪಸ್ವಲ್ಪ ದುಡಿದ ಹಣದಿಂದ ಬಾಲಕ ರಸ್ತೆ ಬದಿ ಆಲೂ ಬಾತ್ ತಿಂದು ತಂಪಾದ ನೆಲದ ಮೇಲೆ ನಿದ್ದೆಗೆ ಜಾರಲು ಪ್ರಯತ್ನಿಸುತ್ತಾನೆ. ಸ್ನಾನ ಮಾಡದೇ ಮತ್ತು ಮುಖ ತೊಳೆಯದೇ ವರ್ಷಗಳಿಂದ ಒಂದೇ ಕಡೆ ಸ್ಥಳದಲ್ಲಿ ಉಳಿದಿರುವ ಅಂಗವಿಕಲ ಹಿರಿಯಜ್ಜನೊಬ್ಬ ಇವರೆಲ್ಲ ಹಾಜರಾತಿ ಖಾತ್ರಿಪಡಿಸಿಕೊಳ್ಳುತ್ತಾನೆ. ವಿಶೇಷವೆಂದರೆ, ನಿಲ್ದಾಣದ ಆವರಣದಲ್ಲಿದ್ದರೂ ಇವರು ಯಾರೂ ಸಹ ಪರಸ್ಪರ ಮಾತನಾಡಿಸುವುದಿಲ್ಲ. ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಇರುತ್ತಾರೆ. ಅವರದ್ದೇ ಆದ ಪ್ರಪಂಚದಲ್ಲಿ!
ಈವರೆಗೆ ಹೇಳಿದ್ದು ಅನಿಶ್ಚಿತತೆ ಮೇಲೆ ಬದುಕುತ್ತಿರುವವರ ಬಗ್ಗೆ. ಇಲ್ಲಿ ಇನ್ನಷ್ಟು ಜನರು ಬರುತ್ತಾರೆ. ಪುಟ್ಟದಾದ ಗಂಟುಮೂಟೆ ಅಥವಾ ಬ್ಯಾಗು ತಲೆ ಕೆಳಗೆ ಹಾಕಿಕೊಂಡು ಮಲಗಿಬಿಡುತ್ತಾರೆ. ಇನ್ನೂ ಕೆಲವರು ಹೊದಿಕೆ ಮತ್ತು ಹರಿದ ದಿಂಬನ್ನು ಹೊತ್ತು ತಂದು ಅಲ್ಲಿ ನಿದ್ರಿಸುತ್ತಾರೆ. ಹಣವಿರದ ಕಾರಣ ಟಿಕೆಟ್ ಖರೀದಿಸಲಾಗದೇ ದಿಕ್ಕು ತೋಚದೇ ಮೈಮುದುಡಿಕೊಂಡು ಮಲಗಿದವರು ಸಿಗುತ್ತಾರೆ. ಈಗೇಕೆ ಅವಸರ, ನಾಳೆ ಹೋದರಾಯಿತು ಎಂದು ಕೆಲ ಪ್ರಯಾಣಿಕರು ಕುಟುಂಬ ಸಮೇತ ಅಲ್ಲಿಯೇ ನಿದ್ದೆ ಮಾಡಿಬಿಡುತ್ತಾರೆ. ತರಗಟ್ಟುವ ಚಳಿಯಿದ್ದರೂ, ತಣ್ಣನೆಯ ನೆಲವಿದ್ದರೂ ಬೆಚ್ಚನೆಯ ನಿದ್ದೆಗೆ ಹಪಹಪಿಸುತ್ತಾರೆ. ಇವರೆಲ್ಲರ ಮಧ್ಯೆ ಇನ್ನೂ ಕೆಲವರು ಸೇರಿರುತ್ತಾರೆ. ಅವರು ಇಲ್ಲಿ ನಿದ್ದೆ ಮಾಡುತ್ತಿರುವುದಕ್ಕೆ ಇನ್ನಷ್ಟು ಕಾರಣಗಳಿರುತ್ತವೆ. ಇವರೆಲ್ಲರೂ ನಿದ್ದೆ ಮಾಡಲೆಂದೇ ಕೆಲವರು ಎಚ್ಚರ ಇರುತ್ತಾರೆ. ಅವರು ನಿದ್ದೆ ಮಾಡಿದ ಕೂಡಲೇ ಅವರ ಬಳಿಯಿರುವುದನ್ನ ತೆಗೆದುಕೊಂಡು ಓಡಿ ಬಿಡಬೇಕೆಂದು ಹೊಂಚು ಹಾಕಿರುತ್ತಾರೆ. ಅವರು ಯಾರು, ಎಲ್ಲಿ ಓಡಿ ಹೋಗುತ್ತಾರೆ ಮತ್ತು ಅವರನ್ನು ಹೇಗೆ ಹಿಡಿಯಬೇಕು ಎಂದು ಅರಿತಿರುವ ಪೊಲೀಸರು ಸಹ ಅಲ್ಲೇ ಕಾವಲಿಗೆ ಇರುತ್ತಾರೆ!
ನಿಲ್ದಾಣದ ಕಾಯಂ ಅತಿಥಿಗಳು ಸೇರಿದಂತೆ ಎಲ್ಲರೂ ನಿದ್ದೆ ಮಾಡಿದ ಕೂಡಲೇ ಎಲ್ಲವೂ ಸ್ತಬ್ಧವಾಯಿತು ಅಂತ ಅನ್ನಿಸಬಹುದು. ಆದರೆ, ಅದು ಹಾಗೆ ಆಗುವುದಿಲ್ಲ. ನಿಜವಾದ ಚಟುವಟಿಕೆ ಆರಂಭವಾಗುವುದೇ ಆಗ. ಇಲ್ಲಿ ರಾತ್ರಿ ಎಂಬುದು ನಿದ್ರಾರಹಿತ ಚಟುವಟಿಕೆ. ಆವರಣದಲ್ಲಿ ಎಲ್ಲರೂ ಒಂದೊಂದು ದಿಕ್ಕಿನಲ್ಲಿ ಮಲಗುತ್ತಾರೆ. ಟಿಕೆಟ್ ಕೌಂಟರ್, ಹೊರಾಂಗಣ, ಮೊಬೈಲ್ ಚಾರ್ಜರ್ ಬಳಿ, ಪ್ರವೇಶದ್ವಾರದ ಹತ್ತಿರ ಎಲ್ಲಿ ಬೇಕೆಂದಲ್ಲಿ ಸಿಗುತ್ತಾರೆ. ನಡೆದಾಡಲು ಜಾಗ ಇರುವುದಿಲ್ಲ. ಅವರು ಕಾಲಿನಡಿ ಸಿಕ್ಕಿಬಿಡುತ್ತಾರೆ. ಅದಕ್ಕಾಗಿ ಓಡಾಡುವವರು ಎಚ್ಚರಿಕೆಯಿಂದ ನಡೆಯಬೇಕು.
ಇಲ್ಲಿ ರಾತ್ರಿ ಪೂರ್ತಿ ರೈಲುಗಳ ಆಗಮನ-ನಿರ್ಗಮನ ಆಗುವ ಕಾರಣ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಲೇ ಇರುತ್ತಾರೆ. ಯಾರು ನಿದ್ದೆ ಮಾಡಲಿ-ಬಿಡಲಿ ಜನರ ದಂಡು ಬರುತ್ತಲೇ ಇರುತ್ತದೆ. ಇಲ್ಲಿನ ಕ್ಯಾಂಟೀನ್, ಹೋಟೆಲ್ ಅಥವಾ ತಿಂಡಿತಿನಿಸು ಮಳಿಗೆ ಯಾವಾಗಲೂ ತೆರೆದಿರುತ್ತದೆ. ಮಧ್ಯರಾತ್ರಿ 1 ಅಥವಾ 2 ಗಂಟೆಯಾದರೂ ಬೆಳಗಿನ 8ರ ಚಹಾ ಕುಡಿದಷ್ಟೇ ಖುಷಿಯಾಗುತ್ತದೆ. ಜೊತೆಗೆ ತಿಂಡಿ, ಮಸಾಲೆ ದೋಸೆ, ಆಲೂಬಾತ್ ಮುಂತಾದವು ಇದ್ದೇ ಇರುತ್ತದೆ. ಅವುಗಳೊಂದಿಗೆ ಚಹಾ ಸೇವಿಸುವ ಕ್ಷಣ ಮನಸ್ಸಿಗೆ ಮುದ ನೀಡುತ್ತದೆ. ರಾತ್ರಿ ಪೂರ್ತಿ ಚಟುವಟಿಕೆಯೇ ಹೀಗೆ ನಡೆಯುತ್ತದೆ.
ಇವೆಲ್ಲದರ ಮಧ್ಯೆ ಬಿಸ್ಕತ್, ಚಹಾ, ಕಾಫಿ, ವಡಾ ಪಾಂವ್, ಇಡ್ಲಿವಡಾ, ಭೇಲ್ಪೂರಿ ಮುಂತಾದವು ಮಾರುವವರೂ ಇರುತ್ತಾರೆ. ಅವರೊಂದಿಗೆ ಮಾತನಾಡಿಸಿದರೆ, ಬದುಕಿನ ಇನ್ನೊಂದು ಮಗ್ಗಲು ಬೆಳಕಿಗೆ ಬರುತ್ತದೆ. ಒಬ್ಬೊಬ್ಬರದ್ದು ಒಂದೊಂದು ಕತೆ, ಒಂದೊಂದು ಅನುಭವದ ಪಾಠ ಹೇಳುತ್ತವೆ.
ರೈಲು ನಿಲ್ದಾಣ ಎಂಬುದು ಬರೀ ಪ್ರಯಾಣಿಕರು ಬಂದು-ಹೋಗುವ ಸ್ಥಳವಲ್ಲ. ಅದು ಬದುಕಿನ ಹಲವು ಮುಖಗಳನ್ನು ಪರಿಚಯಿಸುವ ಜಾಗವೂ ಹೌದು. ಈ ತಾಣವು ಕೆಲವರಿಗೆ ನಿರಂತರ ಆಶ್ರಯವಾದರೆ, ಇನ್ನೂ ಕೆಲವರ ಬಾಳಿನ ತಿರುವಿಗೂ ಕಾರಣವಾಗುತ್ತದೆ. ಈ ಬರಹದಲ್ಲಿ ದಾಖಲಾಗಿರುವ ವ್ಯಕ್ತಿಗಳು ಅಲ್ಲದೇ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡುವ ಜನರೂ ಇರುತ್ತಾರೆ. ಅಸಹಾಯಕ ಸ್ಥಿತಿಯಲ್ಲಿ ಇರುವವರನ್ನು ಸಹಾಯ ಮಾಡುವ ಹಿರಿಯರು ಮತ್ತು ಕಾಳಜಿಯುಳ್ಳವರು ಇರುತ್ತಾರೆ. ಬೇರೆ ಬೇರೆ ಕಾರಣಗಳಿಂದ ಬಹುತೇಕ ಮಂದಿ ನಿಲ್ದಾಣದಲ್ಲಿ ಪದೇ ಪದೇ ಕಾನೂನು ಉಲ್ಲಂಘಿಸುತ್ತಾರೆ. ನಿಯಮಗಳನ್ನು ಪಾಲಿಸುವುದಿಲ್ಲ. ತಪ್ಪುಗಳನ್ನು ಮುಂದುವರೆಸುತ್ತಾರೆ. ಆದರೂ ಸಹ ಇವೆಲ್ಲವನ್ನೂ ಕಂಡು ರೈಲ್ವೆ ಮತ್ತು ಪೊಲೀಸ್ ಇಲಾಖೆಯ ಸಹಿಸಿಕೊಳ್ಳುತ್ತಾರೆ. ಕೆಲವರಿಗೆ ಮುಲಾಜಿಲ್ಲದೇ ದಂಡ ವಿಧಿಸುತ್ತಾರೆ. ಇನ್ನೂ ಕೆಲವರಿಗೆ ಮಾನವೀಯತೆ ತಳಹದಿ ಮೇಲೆ ಕರುಣೆ ತೋರುತ್ತಾರೆ.
ಕೆಲವರು ನಿಲ್ದಾಣದ ಆವರಣದಲ್ಲೇ ಅಡುಗೆ ಸಿದ್ದಪಡಿಸಿಕೊಳ್ಳುತ್ತಾರೆ. ಕೆಲವರು ಬುತ್ತಿ ತಂದಿದ್ದನ್ನು ಅಲ್ಲಿಯೇ ಬಿಚ್ಚುಕೊಂಡು ತಿನ್ನುತ್ತಾರೆ. ಕೆಲ ಬಾರಿ ಬಡವರಿಗೆ ಮತ್ತು ಹಸಿದವರಿಗೂ ನೀಡುತ್ತಾರೆ. ಆಗ ನಿಲ್ದಾಣವು ದಾಸೋಹದ ಸ್ವರೂಪ ಪಡೆಯುತ್ತದೆ.
ರಾತ್ರಿ ಕಳೆಯುತ್ತಿದ್ದಂತೆಯೇ, ಮತ್ತೊಂದು ರಾತ್ರಿ ಬರುತ್ತದೆ. ಎಲ್ಲರೂ ನಿದ್ದೆ ಮಾಡಿದ ನಂತರವೂ "ನೆವರ್ ಸ್ಲೀಪಿಂಗ್" ತಾಣದಲ್ಲಿ ಚಟುವಟಿಕೆ ಮುಂದುವರೆಯುತ್ತದೆ.
-ರಾಹುಲ ಬೆಳಗಲಿ



No comments:

Post a Comment